‘ಸುಂದರಾಂಗ ಜಾಣ’ನ ವಿಶೇಷತೆಗಳು ಜೀರೋ ಜೀಬಿ ಜಾಣ!
Posted date: 15 Thu, Dec 2016 – 09:44:24 AM

‘ದೂರದಿಂದ ಬಂದಂಥ ಸುಂದರಾಂಗ ಜಾಣ’ ಹಾಡಿನಿಂದ ಸ್ಫೂರ್ತಿಗೊಂಡು ಈ ಚಿತ್ರಕ್ಕೆ ಶೀರ್ಷಿಕೆಯನ್ನು ಇಡಲಾಗಿದೆ. ‘ಜಾಣ’ ಎನ್ನುವ ಪದ ಈ ಚಿತ್ರಕ್ಕೆ ತೀರಾ ಸೂಕ್ತವಾಗಿರುವುದೂ ಈ ಟೈಟಲ್‌ಗೆ ಕಾರಣವಾಗಿದೆ. ಇದು ಒಬ್ಬ ಜಾಣ ಪೆದ್ದನ ಕಥೆ. ಇವತ್ತು ಕಂಪ್ಯೂಟರ್ ಜಗತ್ತು ಎಂ.ಬಿ, ಜಿ.ಬಿ. ಗಳನ್ನು ದಾಟಿ ಟೀಬಿಯನ್ನೂ ಮೀರಿಸಿರುವ ಕಾಲದಲ್ಲಿ ನಮ್ಮ ಸುಂದರಾಂಗ ಜಾಣನ ತಲೆ ಮಾತ್ರ ಜೀರೋ ಜೀಬಿಯಲ್ಲೇ ನಿಂತಿದೆ. ಬುದ್ದಿವಂತಿಕೆಯಲ್ಲೀತ ಜೀರೋ ಆದರೂ, ಪ್ರೀತಿಯ ವಿಚಾರಕ್ಕೆ ಬಂದರೆ ಈತ ಸೂಪರ್ ಹೀರೋ! ಬ್ರೈನ್ ಮೆಮೊರಿ ಕಮ್ಮಿಯಾದರೂ ಪ್ರೀತಿಸೋರ ಪಾಲಿನ ಹೃದಯ ಸಿಂಹಾಸನಕ್ಕೆ ಈತ ರಾಯಭಾರಿ... ಆ ವಿಚಾರದಲ್ಲೀತ ಥರ ಥರದ ಆಟಗಳನ್ನು, ಗಿಲೀಟುಗಳನ್ನು ಅಡಗಿಸಿಟ್ಟುಕೊಂಡಿರೋ ಹಾರ್ಡ್ ಡಿಸ್ಕು.
 ತೆಲುಗಿನಲ್ಲಿ ಬಂದು ಸೂಪರ್ ಹಿಟ್ ಆಗಿದ್ದ ‘ಭಲೇ ಭಲೇ ಮಗಾಡಿವೋಯ್’ ಚಿತ್ರದ ಎಳೆಯನ್ನಷ್ಟೇ ಬಳಸಿಕೊಂಡು ‘ಸುಂದರಾಂಗ ಜಾಣ’ನನ್ನು ಮರುಸೃಷ್ಟಿಸಲಾಗಿದೆ. ರಮೇಶ್ ಅರವಿಂದ್ ರಿಮೇಕ್ ಸಿನಿಮಾವನ್ನು ಮಾಡಿದರೂ, ಯಾವತ್ತೂ ಮೂಲ ಚಿತ್ರವನ್ನು ಯಥಾವತ್ತು ಭಟ್ಟಿ ಇಳಿಸಿದವರಲ್ಲ. ಮೂಲ ಚಿತ್ರದ ಪ್ರಧಾನ ಅಂಶಗಳನ್ನಷ್ಟೇ ಬಳಸಿಕೊಂಡು ತಮ್ಮದೇ ಶೈಲಿಯಲ್ಲಿ ಚಿತ್ರವನ್ನು ಕಟ್ಟಿಕೊಡುವ ಭಿನ್ನ ನಿರ್ದೇಶಕ. ಇದಕ್ಕೆ ರಮೇಶ್ ಅವರೇ ನಿರ್ದೇಶಿಸಿದ್ದ ‘ರಾಮ ಶಾಮ ಭಾಮ’ ಒಂದೊಳ್ಳೆ ಉದಾಹರಣೆ. ಈಗ ಸುಂದರಾಂಗ ಜಾಣ ಚಿತ್ರವನ್ನೂ ಸಹಾ ಅದೇ ರೀತಿ ರೂಪಿಸಿದ್ದಾರೆ.
ಹೀಗೆ ಹಲವಾರು ರೀತಿಯಲ್ಲಿ ಕುತೂಹಲ ಹುಟ್ಟಿಸಿರುವ ‘ಸುಂದರಾಂಗ ಜಾಣ’ ಇದೇ ತಿಂಗಳು ಬಿಡುಗಡೆಯಾಗುತ್ತಿದೆ.
ಅಷ್ಟಕ್ಕೂ ಈ ಸಿನಿಮಾವನ್ನು ಜನ ನೋಡಲೇಬೇಕು ಅನ್ನೋದಕ್ಕೆ ನೂರೆಂಟು ಕಾರಣಗಳಿವೆ. ಅದರಲ್ಲಿ ಮುಖ್ಯವಾದವುಗಳನ್ನಷ್ಟೇ ಪಟ್ಟಿ ಮಾಡುವುದಾದರೆ.....
ರಮೇಶ್-ಗಣೇಶ್ ಡಬಲ್ ಧಮಾಕಾ
ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆಗಳು ಎನಿಸಿಕೊಂಡ ಇಬ್ಬರು ಹೀರೋಗಳಾದ ರಮೇಶ್ ಮತ್ತು ಗಣೇಶ್ ಒಂದಾಗಿದ್ದಾರೆ. ನಟನೆ ಮತ್ತು ನಿರ್ದೇಶನದಲ್ಲಿ ಗ್ಲೋಬಲ್ ಲೆವೆಲ್‌ನಲ್ಲಿ ಹೆಸರು ಮಾಡಿರುವ ರಮೇಶ್ ಅರವಿಂದ್ ಗೋಲ್ಡನ್ ಸ್ಟಾರ್ ಗಣೇಶ್‌ಗಾಗಿ ನಿರ್ದೇಶನ ಮಾಡಿರುವ ಚಿತ್ರ ಇದು.
ಮುಂಗಾರು ನಾಯಕರು
ಗಣೇಶ್ ಅವರ ಪಾಲಿಗೆ ಮುಂಗಾರು ಮಳೆ ಹೇಗೆ ಅಭೂತಪೂರ್ವ ಯಶಸ್ಸನ್ನು ತಂದು ಕೊಟ್ಟಿತ್ತೋ ಅದಕ್ಕೂ ಮುನ್ನವೇ ರಮೇಶ್ ಅವರನ್ನು ಕೂಡಾ ಮುಂಗಾರು ಕೈ ಹಿಡಿದಿತ್ತು. ರಮೇಶ್ ಅರವಿಂದ್ ಅವರು ಹೀರೋ ಆಗಿ, ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಡುತ್ತಿದ್ದ ಕಾಲದಲ್ಲಿ ಮುಂಗಾರಿನ ಮಿಂಚು ಎನ್ನುವ ಚಿತ್ರ ದೊಡ್ಡ ಮಟ್ಟದ ಯಶಸ್ಸು ಮತ್ತು ಕೀರ್ತಿಯನ್ನು ತಂದುಕೊಟ್ಟಿತ್ತು.
ತ್ಯಾಗರಾಜರ ಸಂಗಮ!
     ಬಹುಶಃ ರಮೇಶ್ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದಂತಾ ಪಾತ್ರಗಳಲ್ಲೇ ಗಣೇಶ್ ಕೂಡಾ ನಟಿಸುತ್ತಾ ಬಂದಿರೋದು ಕಾಕತಾಳೀಯವೇ ಇರಬಹುದು. ರಮೇಶ್ ಅರವಿಂದ್ ಅವರು ನಾಯಕನಟರಾಗಿ ನಟಿಸಿದ ಅನೇಕ ಚಿತ್ರಗಳಲ್ಲಿ ನಾಯಕಿಯನ್ನು ಬಿಟ್ಟುಕೊಟ್ಟು ತ್ಯಾಗಮಯಿ ಎನಿಸಿಕೊಂಡವರು. ಇದೇ ಕಾರಣಕ್ಕೆ ರಮೇಶ್ ಅರವಿಂದ್ ಅವರನ್ನು ಜನ ಮತ್ತು ಮಾಧ್ಯಮಗಳು ‘ತ್ಯಾಗರಾಜ’ ಅಂತಲೇ ಕಿರೀಟ ತೊಡಿಸಿದ್ದೂ ಇದೆ. ಇದೇ ರೀತಿ ಗಣೇಶ್ ಕೂಡಾ ಪ್ರೀತಿಯನ್ನು ತ್ಯಾಗ ಮಾಡುವ ಚಿತ್ರಗಳಲ್ಲಿ ನಟಿಸಿ ರಮೇಶ್ ಅರವಿಂದ್ ಅವರ ಹಾದಿಯಲ್ಲೇ ನಡೆದವರು. ಈಗ ‘ಸುಂದರಾಂಗ ಜಾಣ’ದ ಮೂಲಕ ಈ ಇಬ್ಬರೂ ತ್ಯಾಗರಾಜರ ಮಹಾಸಂಗಮವಾಗಿದೆ.
ಪುಟಾಣಿಗಳ ಫೇವರಿಟ್ ಹೀರೋಗಳು
ಸುಂದರಾಂಗ ಜಾಣ ಚಿತ್ರ ತೆರೆಗೆ ಬರೋಹೊತ್ತಿಗೆ ಮಕ್ಕಳಿಗೆ ಕ್ರಿಸ್‌ಮಸ್ ರಜೆ ಕೂಡಾ ಶುರುವಾಗಿರುತ್ತದೆ. ರಮೇಶ್ ಮತ್ತು ಗಣೇಶ್ ಇಬ್ಬರೂ ಹೆಣ್ಣುಮಕ್ಕಳ ಪಾಲಿನ ಹಾಟ್ ಫೇವರಿಟ್ ನಟರು ಮಾತ್ರವಲ್ಲ, ಈ ಇಬ್ಬರೂ ಸ್ಟಾರ್‌ಗಳಿಗೆ ಪುಟಾಣಿ ಫ್ಯಾನ್ಸ್ ಕೂಡಾ ಹೆಚ್ಚು. ಮಕ್ಕಳನ್ನು ರಂಜಿಸುವುದು ತೀರಾ ಕಷ್ಟದ ಕೆಲಸ. ಆದರೆ ರಮೇಶ್ ಮತ್ತು ಗಣೇಶ್ ಇಬ್ಬರೂ ಮಕ್ಕಳ ಮನಸ್ಸನ್ನು ಸೂರೆಗೊಂಡಿರುವ ಕಲಾವಿದರು. ಹೀಗಾಗಿ ಈ ಬಾರಿಯ ಕ್ರಿಸ್‌ಮಸ್ ರಜೆಗೆ ಮಕ್ಕಳಿಗೆ ಈ ಚಿತ್ರ ಒಂದು ಗಿಫ್ಟ್ ಆಗಲಿದೆ.
ಜಗತ್ತಿನ ಕಣ್ಣು ಜಾಣನ ಮೇಲೆ!
‘ಉಲಗ ನಾಯಗನ್’ (ಜಗತ್ತಿನ ನಾಯಕ) ಎಂದೇ ಹೆಸರಾದ ಕಮಲ್ ಹಾಸನ್ ಅವರ ‘ಉತ್ತಮ ವಿಲ್ಲನ್’ ಎಂಬ ಭಿನ್ನ ಬಗೆಯ ಸಿನಿಮಾವನ್ನು ನಿರ್ದೇಶಿಸಿದ ನಂತರ ರಮೇಶ್ ಅರವಿಂದ್ ಡೈರೆಕ್ಷನ್‌ನಲ್ಲಿ ಬಂದಿರುವ ಚಿತ್ರ ‘ಸುಂದರಾಂಗ ಜಾಣ’.  ಕಮಲ್ ಹಾಸನ್ ಅವರ ಚಿತ್ರದ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದ್ದ ರಮೇಶ್ ಅರವಿಂದ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಕಾರಣಕ್ಕೆ ಕನ್ನಡ ಮಾತ್ರವಲ್ಲದೆ, ಪರಭಾಷೆಯ ಚಿತ್ರರಂಗ ಕೂಡಾ ‘ಸುಂದರಾಂಗ ಜಾಣ’ನ ಬಗ್ಗೆ ಕುತೂಹಲದ ಕಣ್ಣು ನೆಟ್ಟಿವೆ!
ನಿರ್ಮಾಣ ಶ್ರೀಮಂತಿಕೆಗೆ ಹೆಸರಾಗಿರುವ ರಾಕ್ ಲೈನ್ ವೆಂಕಟೇಶ್ ಮತ್ತು ಅಲ್ಲು ಅರವಿಂದ್ ಅವರ ನಿರ್ಮಾಣದ ‘ಸುಂದರಾಂಗ ಜಾಣ’ ಕನ್ನಡದ ಪ್ರೇಕ್ಷಕರ ಪಾಲಿಗೆ ಭರ್ಜರಿ ಮನರಂಜೆ ನೀಡೋದಂತೂ ಖಚಿತ.
 * * * *

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed